Home | ರಾಜ್ಯ ವಾರ್ತೆ | ಮೈಸೂರು | ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬಂದರೆ ರಾಜ್ಯದ 74 ಕ್ಷೇತ್ರಗಳು ಮಹಿಳೆಯರ ಪಾಲಿಗೆ

ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬಂದರೆ ರಾಜ್ಯದ 74 ಕ್ಷೇತ್ರಗಳು ಮಹಿಳೆಯರ ಪಾಲಿಗೆ

Font size: Decrease font Enlarge font

ಬೆಂಗಳೂರು,ಮಾರ್ಚ್ 8: ರಾಷ್ಟ್ರಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬಂದರೆ ರಾಜ್ಯದ ಎಪ್ಪತ್ನಾಲ್ಕು ವಿಧಾನಸಭಾ ಕ್ಷೇತ್ರಗಳು ಮಹಿಳೆಯರ ವಶಕ್ಕೆ ಹೋಗಲಿದ್ದು ಇದರ ಪರಿಣಾಮವಾಗಿ ಸಚಿವರಾದ ಶ್ರೀರಾಮುಲು, ಮುರುಗೇಶ್ ನಿರಾಣಿ, ಜಗದೀಶ್ ಶೆಟ್ಟರ್, ಗೋವಿಂದ ಕಾರ್ಜೋಳ್, ಶಿವನಗೌಡ ನಾಯಕ್ ಹಾಗೂ ಶಿವರಾಜ್ ತಂಗಡಗಿ ಸೇರಿದಂತೆ ಹಲ ಪ್ರಮುಖರು ಬಲಿಯಾಗುವ ಸಾಧ್ಯತೆಗಳಿವೆ.

 

ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬಂದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ೨೨೪ ಕ್ಷೇತ್ರಗಳ ಪೈಕಿ ಎಪ್ಪತ್ನಾಲ್ಕು ಕ್ಷೇತ್ರಗಳಲ್ಲಿ ಮಹಿಳೆಯರು ವಿಧಾನಸಭೆಗೆ ಆರಿಸಿ ಬರಲಿದ್ದು, ಇದಕ್ಕಾಗಿ ಮೀಸಲು ಪಟ್ಟಿಗೆ ಸೇರುವ ಕ್ಷೇತ್ರಗಳ ಗಣನೆ ಈಗಾಗಲೇ ಪ್ರಾರಂಭವಾಗಿದೆ. ರಾಜ್ಯ ಹಾಗೂ ದೇಶಾದ್ಯಂತ ಮೀಸಲು ಮಸೂದೆ ಹೊಸ ಕ್ರಾಂತಿಯನ್ನೇ ಹುಟ್ಟು ಸೃಷ್ಟಿಸಲಿದೆ.

ಶೇಕಡಾ ೪೯.೪೯ ಕ್ಕಿಂತ ಹೆಚ್ಚಿನ ಮಹಿಳಾ ಮತದಾರರು ಇರುವ ವಿಧಾನಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿ ಪರಿವರ್ತನೆಯಾಗಲಿದ್ದು ಇದರ ಪರಿಣಾಮವಾಗಿ ಆರು ಮಂದಿ ಸಚಿವರು ಸೇರಿದಂತೆ ಹಲವು ಪ್ರಮುಖರು ತಮ್ಮ ಕ್ಷೇತ್ರಗಳನ್ನು ಕಳೆದುಕೊಳ್ಳಲಿದ್ದಾರೆ.

 

ವಿಚಿತ್ರವೆಂದರೆ ಉತ್ತರ ಕನ್ನಡ, ಬೀದರ್, ಬಿಜಾಪುರ ಜಿಲ್ಲೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಏಕೆಂದರೆ ಇಲ್ಲೆಲ್ಲಾ ಮಹಿಳಾ ಮತದಾರರ ಸಂಖ್ಯೆ ನಿಗದಿಪಡಿಸಿರುವ ಮಾರ್ಗಸೂಚಿಗಿಂತ ಕಡಿಮೆಯಿದೆ.

 

ಉಳಿದಂತೆ ತುಮಕೂರು ಜಿಲ್ಲೆಯ ಕುಣಿಗಲ್, ತಿಪಟೂರು, ತುರುವೇಕೆರೆ, ಮೈಸೂರಿನ ನರಸಿಂಹರಾಜಾ (ತನ್ವೀರ್ ಸೇಠ್) ಕೃಷ್ೞರಾಜಾ (ರಾಮದಾಸ್) ಚಾಮರಾಜ (ಶಂಕರಲಿಂಗೇಗೌಡ) ಹಾಗೂ ಕೃಷ್ಣರಾಜ ನಗರ (ಸಾರಾ ಮಹೇಶ) ಕ್ಷೇತ್ರಗಳು ಮಹಿಳೆಯರ ಪಾಲಿಗೆ ಹೋಗಲಿವೆ.

 

ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ (ರಮೇಶ್ ಬಂಡೀಸಿದ್ದೇಗೌಡ) ಮಂಡ್ಯ(ಶ್ರೀ ನಿವಾಸ್) ನಾಗಮಂಗಲ (ಸುರೇಶ್ ಗೌಡ) ಮೇಲ್ಕೋಟೆ (ಪುಟ್ಟರಾಜು) ಅವರ ಕ್ಷೇತ್ರಗಳು ಮಹಿಳೆಯರ ಪಾಲಿಗೆ ಹೋಗಲಿದ್ದು ಉಳಿದಂತೆ ಮದ್ದೂರು ವಿಧಾನಸಭಾ ಕ್ಷೇತ್ರವೂ ಮಹಿಳಾ ಕ್ಷೇತ್ರವಾಗಿ ಮೀಸಲಾಗಲಿದೆಯಾದರೂ ಅಲ್ಲಿರುವುದು ಕಲ್ಪನಾ ಸಿದ್ಧರಾಜು ಅವರಾದ್ದರಿಂದ ಅವರಿಗೆ ಕ್ಷೇತ್ರ ಕೈ ಬಿಟ್ಟು ಹೋಗುವುದಿಲ್ಲ.

 

ರಾಯಚೂರು-ಕೊಪ್ಪಳದ ವ್ಯಾಪ್ತಿಯಲ್ಲಿರುವ ಕ್ಷೇತ್ರಗಳ ಪೈಕಿ ಗಂಗಾವತಿ, ಕೊಪ್ಪಳ, ಕನಕಗಿರಿ, ರಾಯಚೂರು ಗ್ರಾಮೀಣ, ಮಸ್ಕಿ, ಮಾನ್ವಿ, ಸಿಂಧನೂರು, ದೇವದುರ್ಗ, ಲಿಂಗಸುಗೂರು ಕ್ಷೇತ್ರಗಳು ಮಹಿಳೆಯರ ವಶಕ್ಕೆ ಹೋಗಲಿದ್ದು ಇದರ ಪರಿಣಾಮವಾಗಿ ಕನಕಗಿರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಕ್ಕರೆ ಖಾತೆ ಸಚಿವ ಶಿವರಾಜ ತಂಗಡಗಿ ಹಾಗೂ ಗ್ರಂಥಾಲಯ ಖಾತೆ ಸಚಿವ ಶಿವನಗೌಡ ನಾಯಕ್ ಕ್ಷೇತ್ರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ಮಹಿಳೆಯರ ಪಾಲಿಗೆ ದಕ್ಕಲಿದ್ದು, ಹುಬ್ಬಳ್ಳಿ-ಧಾರವಾಡ ಪೂರ್ವ ಹಾಗೂ ಹುಬ್ಬಳ್ಳಿ ಧಾರವಾಡ ಕೇಂದ್ರ (ಜಗದೀಶ್ ಶೆಟ್ಟರ್)ವಿಧಾನಸಭಾ ಕ್ಷೇತ್ರಗಳು ಮಹಿಳೆಯ ಕೈಗೆ ದಕ್ಕಲಿವೆ.

 

ಮುದೋಳ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಣ್ಣ ನೀರಾವರಿ ಸಚಿವ ಗೋವಿಂದ ಕಾರ್ಜೋಳ್, ಬೀಳಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೂಡಾ ಗಂಡಾಂತರ ಎದುರಿಸುತ್ತಿದ್ದಾರೆ.

 

ಯಮಕನ ಮರಡಿ, ಬೆಳಗಾಂ ಉತ್ತರ, ಬೆಳಗಾಂ ಗ್ರಾಮೀಣ, ಗೋಕಾಕ್, ಬಾದಾಮಿ, ಹುನಗುಂದ, ಜಮಖಂಡಿ, ಬಾಗಲಕೋಟೆ ಕ್ಷೇತ್ರಗಳು ಮೀಸಲಾತಿಗೆ ಒಳಗಾಗುತ್ತಿದ್ದು ಅರಭಾವಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಾಲಚಂದ್ರ ಜಾರಕಿಹೊಳಿಗೂ ವಲಸೆ ಹೋಗುವ ಅನಿವಾರ್ಯತೆ ಎದುರಾಗಿ ಬಿಟ್ಟಿದೆ.

 

ಗುರುಮಿಟ್ಕಲ್, ಚಿತಾಪೂರ್, ಯಾದಗಿರಿ, ಸೇಡಂ, ಷಹಾಪುರ, ಜೇವರ್ಗಿ, ಶೋರಾಪುರ, ಶಿರಗುಪ್ಪ, ಕಂಪ್ಲಿ, ಹಿರಿಯೂರು, ಚಿತ್ರದುರ್ಗ ಕ್ಷೇತ್ರಗಳು ಮೀಸಲಾಗುತ್ತಿದ್ದು ಬಳ್ಳಾರಿಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ಬಳ್ಳಾರಿ ನಗರದಲ್ಲಿ ಕೆ.ಎಂ.ಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ ಗಂಟು ಮೂಟೆ ಕಟ್ಟುವ ಪರಿಸ್ಥಿತಿ ಎದುರಾಗಲಿದೆ.

 

ಶಿವಮೊಗ್ಗ ಜಿಲ್ಲೆಯ ಸಾಗರ (ಬೇಳೂರು ಗೋಪಾಲಕೃಷ್ಣ) ಭದ್ರಾವತಿ (ಬಿ.ಕೆ.ಸಂಗಮೇಶ್) ಹಾಗೂ ತೀರ್ಥಹಳ್ಳಿಯ ಪಟಮಕ್ಕಿ ರತ್ನಾಕರ್ ಅವರಿಗೂ ಮಹಿಳೆಯರ ಹೊಡೆತ ಬೀಳಲಿದೆ.

ಬೈಂದೂರು, ಕಾರ್ಕಳ, ಕಾಫು, ಕುಂದಾಪುರ, ಉಡುಪಿ, ಮೂಡಿಗೆರೆ, ಶೃಂಗೇರಿ, ಕ್ಷೇತ್ರಗಳು ಮೀಸಲಾಗಲಿದ್ದು ಚಿಕ್ಕಮಗಳೂರಿನ ಸಿ.ಟಿ.ರವಿ ಕೂಡಾ ಮಹಿಳೆಯರಿಗೆ ಕ್ಷೇತ್ರ ಬಿಟ್ಟು ಕೊಡುವ ಅನಿವಾರ್ಯತೆ ಇದೆ

 

ಕುಣಿಗಲ್, ತಿಪಟೂರು, ತುರುವೇಕೆರೆ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕೆ.ಜಿ.ಎಫ್,ಶ್ರೀ ನಿವಾಸಪುರ, ಚನ್ನಪಟ್ಟಣ, ಸಕಲೇಶಪುರ, ಹಾಸನ, ಶ್ರವಣಬೆಳಗೊಳ, ಅರಸೀಕೆರೆ, ಮೂಡಬಿದ್ರೆ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಹಾಗೂ ಬಂಟ್ವಾಳ ಕ್ಷೇತ್ರಗಳು ಮಹಿಳೆಯರ ಪಾಲಿಗೆ ಹೋಗಲಿದ್ದರೆ ಬೆಂಗಳೂರಿನಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರವೊಂದೇ ಮಹಿಳೆಯರ ಪಾಲಿಗೆ ಹೋಗಲಿದೆ.

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org