Home | ರಾಜ್ಯ ವಾರ್ತೆ | ಹುಬ್ಬಳ್ಳಿ | ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ವಿಜಯನಗರ ಪುನಶ್ಚೇತನ ಟ್ರಸ್ಟ್‌ಗೆ ೮೦ ಎಕರೆ ಭೂಮಿ ಹಸ್ತಾಂತರ - ಸರ್ಕಾರದ ಧೋರಣೆ ವಿರೋಧಿಸಿದ ಜೆಡಿಎಸ್ ಸದಸ್ಯರು

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ವಿಜಯನಗರ ಪುನಶ್ಚೇತನ ಟ್ರಸ್ಟ್‌ಗೆ ೮೦ ಎಕರೆ ಭೂಮಿ ಹಸ್ತಾಂತರ - ಸರ್ಕಾರದ ಧೋರಣೆ ವಿರೋಧಿಸಿದ ಜೆಡಿಎಸ್ ಸದಸ್ಯರು

Font size: Decrease font Enlarge font

ಬೆಂಗಳೂರು,ಮಾರ್ಚ್ 3: ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ವಿಜಯನಗರ ಪುನಶ್ಚೇತನ ಟ್ರಸ್ಟ್‌ಗೆ ೮೦ ಎಕರೆ ಭೂಮಿ ಹಸ್ತಾಂತರಿಸಿರುವ ವಿವಾದ ಮೇಲ್ಮನೆಯಲ್ಲಿಂದು ಪ್ರತಿಧ್ವನಿಸಿದ್ದು, ಸರ್ಕಾರದ ಧೋರಣೆಯನ್ನು ಪ್ರತಿಭಟಿಸಿ ಕಾಂಗ್ರೆಸ್ ಜೆಡಿ‌ಎಸ್ ಸದಸ್ಯರು ಧರಣಿ ನಡೆಸಿದ ಬೆಳವಣಿಗೆ ನಡೆಯಿತು. ಇದರ ಪರಿಣಾಮ ಸದನವನ್ನು ಸ್ವಲ್ಪಕಾಲ ಮುಂದಕ್ಕೆ ಹಾಕುವ ವಾತಾವರಣವೂ ಕೂಡ ನಿರ್ಮಾಣವಾಗಿತ್ತು.

 

 

ಇಂದು ಸದನ ಸಮಾವೇಶಗೊಳ್ಳುತ್ತಿದ್ದಂತೆ, ಪ್ರತಿಪಕ್ಷದ ನಾಯಕಿ ಮೋಟಮ್ಮ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ೮೦ ಎಕರೆ ಪ್ರದೇಶವನ್ನು ವಿಜಯನಗರ ಪುನಶ್ಚೇತನ ಟ್ರಸ್ಟ್‌ಗೆ ನೀಡುತ್ತಿರುವ ವಿಚಾರ ಪ್ರಸ್ತಾಪಿಸಿ, ನಾಡಿನ ಸಾಂಸ್ಕೃತಿಕ ವಲಯ ಈ ಬೆಳವಣಿಗೆಯ ವಿರುದ್ಧ ತಿರುಗಿ ಬಿದ್ದಿದೆ. ಕನ್ನಡ ವಿಶ್ವವಿದ್ಯಾಲಯ ಕನಸಿನ ವಿಶ್ವವಿದ್ಯಾಲಯ. ಇಂತಹ ವಿಶ್ವವಿದ್ಯಾಲಯದ ಭೂಮಿ ಕಬಳಿಸಲು ಹುನ್ನಾರ ನಡೆದಿದೆ. ಈ ಕುರಿತಾದ ಆದೇಶ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

 

ಜೆಡಿ‌ಎಸ್‌ನ ಎಂ.ಸಿ.ನಾಣಯ್ಯ, ಟ್ರಸ್ಟ್‌ನಲ್ಲಿ ಯಾರ್‍ಯಾರು ಇದ್ದಾರೆ. ಯಾವ ಉದ್ದೇಶಕ್ಕೆ ಭೂಮಿ ನೀಡುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಪ್ರಶ್ನಿಸಿದರು. ಸರ್ಕಾರ ಕೂಡಲೇ ಆದೇಶ ವಾಪಸ್ ಪಡೆಯಬೇಕೆಂದು ಕಾಂಗ್ರೆಸ್ ಮತ್ತು ಜೆಡಿ‌ಎಸ್ ಸದಸ್ಯರು ಧರಣಿ ನಡೆಸಿದರು. ಆಗ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ, ಜನತೆ ನಮಗೆ ಜನಾದೇಶ ನೀಡಿದ್ದಾರೆ. ನಾವು ಭೂಮಿ ನೀಡುತ್ತೇವೆ ಎಂದು ಗುಡುಗಿದರು. ಸಚಿವ ಜನಾರ್ದನ ರೆಡ್ಡಿ, ಇದು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮರುಕಳಿಸಲು ಮಾಡುತ್ತಿರುವ ಪ್ರಯತ್ನವಾಗಿದೆ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದು ಸಮರ್ಥಿಸಿಕೊಂಡರು.

 

 

ಆದರೆ ಪ್ರತಿಪಕ್ಷ ಸದಸ್ಯರು ಪಟ್ಟು ಬಿಡಲಿಲ್ಲ. ಧರಣಿಯನ್ನು ಹಿಂದಕ್ಕೆ ಪಡೆಯಲು ನಿರಾಕರಿಸಿದರು. ಆಗ ಸದನವನ್ನು ಸ್ವಲ್ಪ ಕಾಲ ಮುಂದಕ್ಕೆ ಹಾಕಿದ ಸಭಾಪತಿ ವೀರಣ್ಣ ಮತ್ತೀಕಟ್ಟೆ, ತೆರೆ ಮರೆ ಸಂಧಾನ ನಡೆಸಿದರು. ಮತ್ತೆ ಅರ್ಧತಾಸಿನ ನಂತರ ಸದನ ಸಮಾವೇಶಗೊಂಡಾಗ, ನಾಳೆ ಹಂಪಿ ವಿಶ್ವವಿದ್ಯಾಲಯದ ಭೂಮಿ ಹಸ್ತಾಂತರ ಕುರಿತು ನಿಯಮ ೬೮ ರ ಅಡಿ ಸಾರ್ವಜನಿಕ ಮಹತ್ವದಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಭರವಸೆ ನೀಡಿದ ನಂತರ ಕಾಂಗ್ರೆಸ್, ಜೆಡಿ‌ಎಸ್ ಸದಸ್ಯರು ಧರಣಿಯನ್ನು ಹಿಂದಕ್ಕೆ ಪಡೆದರು. 

 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org