ಬೆಂಗಳೂರು: ಕಲ್ಲಿದ್ದಲು ಖರೀದಿ - ಯಡಿಯೂರಪ್ಪ -ಎಚ್.ಡಿ.ರೇವಣ್ಣ ಭಾರೀ ಮಾತಿನ ಚಕಮಕಿ
ಬೆಂಗಳೂರು,ಮಾರ್ಚ್ 2;ಕಲ್ಲಿದ್ದಲು ಖರೀದಿ ಹಗರಣ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ರೇವಣ್ಣ ಅವರ ನಡುವೆ ವಿಧಾನಸಭೆಯಲ್ಲಿಂದು ಭಾರೀ ಮಾತಿನ ಚಕಮಕಿ ನಡೆದಿದ್ದು, ಪರಸ್ಪರ ಕೆಸರು ಕೆಸರೆಚಿಕೊಂಡ ಘಟನೆ ನಡೆಯಿತು.
ಉಭಯ ನಾಯಕರ ಜುಗಲ್ ಬಂಧಿಗೆ ಕಾಂಗ್ರೆಸ್ ಸದಸ್ಯರು ತುಪ್ಪ ಸುರಿಯುವ ಮೂಲಕ ರಾಜ್ಯದ ಜನರಿಗೆ ವಿಪುಲ ಮನರಂಜನೆ ಒದಗಿಸಿದರು.
ರಾಜ್ಯದ ವಿದ್ಯುತ್ ಸಮಸ್ಯೆ ಕುರಿತು ಪ್ರತಿಪಕ್ಷ ಸದಸ್ಯರು ಮಾಡಿದ ಪ್ರಸ್ತಾಪಕ್ಕೆ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಹೆಚ್.ಡಿ.ರೇವಣ್ಣ ಮಧ್ಯೆ ಪ್ರವೇಶಿಸಿ, ಈ ರೀತಿ ಕಲ್ಲಿದ್ದಲು ಖರೀದಿಸುವ ವ್ಯವಹಾರದಲ್ಲಿ ಅವ್ಯವಹಾರ ನಡೆದಿದ್ದು ಇದನ್ನು ದಾಖಲೆ ಸಮೇತ ಬಹಿರಂಗಪಡಿಸಲು ಸಿದ್ಧ.ನಿಮಗೆ ಪ್ರಾಮಾಣಿಕತೆಯಿದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಡಿ ಎಂದು ಸವಾಲು ಹಾಕಿದರು.
ರೇವಣ್ಣ ಅವರ ಮಾತಿನಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರುತೀವ್ರ ವಾಗ್ಧಾಳಿನಡೆಸಿದಾಗ ಎದ್ದು ನಿಂತ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತಿತರರು, ಕಲ್ಲಿದ್ದಲು ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ರೇವಣ್ಣ ನೇರವಾಗಿ ಆರೋಪ ಮಾಡುತ್ತಿದ್ದಾರೆ. ಹೀಗಿರುವಾಗ ನೀವು ಸುಮ್ಮನಿದ್ದರೆ ಅದನ್ನು ಒಪ್ಪಿಕೊಂಡಂತೆ ಆಗುತ್ತದೆ ಎಂದರು.
ನಿಮಗೆ ನಿಜಕ್ಕೂ ಶಕ್ತಿಯಿದ್ದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಡಿ ಎಂದಾಗ, ಪುನ: ಎದ್ದು ನಿಂತ ರೇವಣ್ಣ, ಹಗರಣ ನಡೆದಿದೆ ಎಂಬುದಕ್ಕೆ ನನ್ನ ಬಳಿ ಎಲ್ಲ ದಾಖಲೆಗಳಿವೆ. ಇದನ್ನು ಸಾಬೀತು ಪಡಿಸಲು ನಾನು ಸಿದ್ಧ. ಹೀಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸಿಕೊಡಿ ಎಂದು ಆಗ್ರಹ ಪಡಿಸಿದರು.
ಇದರಿಂದ ಕೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ; ನಾನು ಅಧಿಕಾರಕ್ಕೆ ಬಂದ ದಿನದಿಂದ ಈ ಅಪ್ಪ ಮಕ್ಕಳಿಗೆ ನನ್ನನ್ನು ಇಳಿಸುವುದೇ ಗುರಿಯಾಗಿ ಹೋಗಿದೆ.ಇವತ್ತಿಗೂ ಅದನ್ನೇ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇವರಿಗೆ ಪ್ರಜಾಪ್ರಭುತ್ವದಲ್ಲಿ ನಿಜಕ್ಕೂ ನಂಬಿಕೆ ಇದ್ದಿದ್ದರೆ ಜೆಡಿಎಸ್ ನೇತೃತ್ವದ ಸರ್ಕಾರಕ್ಕೆ ನಾವು ಕೊಟ್ಟ ಬೆಂಬಲವನ್ನು ಹಿಂಪಡೆದಾಗ ಇವರೇ ಕೇವಲ ಹದಿಮೂರು ಜನ ಯಂಕ ನಾಣಿ ಸೀನ ಎಂಬಂತೆ ಸಚಿವರು ಕುಳಿತು ಸಚಿವ ಸಂಪುಟ ಸಭೆ ನಡೆಸಿ ಕಾನೂನು ಬಾಹಿರವಾಗಿ ತೀರ್ಮಾನ ತೆಗೆದುಕೊಂಡರಲ್ಲ? ಇವರಿಂದ ನಾವು ಪಾಠ ಕಲಿಯಬೇಕೇ? ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತಿತರರು; ಅವತ್ತು ಇವರೇನಾದರೂ ಕಾನೂನು ಬಾಹಿರ ತೀರ್ಮಾನ ತೆಗೆದುಕೊಂಡಿದ್ದರೆ ಅದನ್ನು ಬಹಿರಂಗಪಡಿಸಿ. ಹಾಗೊಂದು ವೇಳೆ ನೀವು ಬಹಿರಂಗಪಡಿಸದೇ ಇದ್ದರೆ ಆ ಆಕ್ರಮಕ್ಕೆ ನೀವು ಬೆಂಬಲ ವ್ಯಕ್ತಪಡಿಸಿದಂತೆ.ಹಾಗೆ ಮಾಡಬಾರದು ಎಂದರು.
ಇದೇ ಹಂತದಲ್ಲಿ ಮಾತನಾಡಿದ ರೇವಣ್ಣ, ನಾವು ಏನೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲು ನಿಮಗೆ ಅಧಿಕಾರವಿದೆ. ತಗಳ್ರೀ. ಹಾಗೆ ಮಾಡದೇ ಬರೀ ಟೀಕೆ ಮಾಡಿದರೆ ಏನರ್ಥ? ಅಂತ ಪ್ರಶ್ನಿಸಿದರು.
ಪುನ: ಮಾತನಾಡಿದ ಯಡಿಯೂರಪ್ಪ, ಕಲ್ಲಿದ್ದಲು ವ್ಯವಹಾರಕ್ಕೆ ಸಂಬಂಧಿಸಿದಂತೆ ರೇವಣ್ಣ ಏನು ಹೇಳಿದ್ದಾರೆ? ಅದು ಸತ್ಯಕ್ಕೆ ದೂರವಾದುದು. ನನ್ನ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಕೆಪಿಸಿಎಲ್ ಕಂಪನಿಯಿಂದ ಆರು ಲಕ್ಷ ಟನ್ ಕಲ್ಲಿದ್ದಲು ಖರೀದಿ ಮಾಡಲು ಆದೇಶ ನೀಡಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಕಂಪನಿಗಳ ಪೈಕಿ ಭಾಟಿಯಾ ಕಂಪನಿ ಅತ್ಯಂತ ಕಡಿಮೆ ದರ ನಿಗದಿ ಮಾಡಿತ್ತು ಎಂದು ಹೇಳಿದರು.
ಇದನ್ನೂ ಮಾತುಕತೆಯ ಮೂಲಕ ಕಡಿಮೆ ಮಾಡಿಸಿ ನಮ್ಮ ಸರ್ಕಾರಕ್ಕೆ ಹಣ ಉಳಿತಾಯವಾಗುವಂತೆ ಮಾಡಲಾಯಿತು. ಇದೇ ಭಾಟಿಯಾ ಕಂಪನಿ ನಮಗೆ ಪೂರೈಸಿದ್ದಕ್ಕಿಂತ ಎರಡು ಸಾವಿರ ರೂಗಳಷ್ಟು ಹೆಚ್ಚಿನ ದರದಲ್ಲಿ ಆಂಧ್ರಪ್ರದೇಶಕ್ಕೆ ಕಲ್ಲಿದ್ದಲು ಪೂರೈಸಿತ್ತು.
ಇದನ್ನು ಗಮನಿಸಿದರೆ ನಾವು ಯಾವ ಪ್ರಮಾಣದಲ್ಲಿ ಸರ್ಕಾರಕ್ಕೆ ಉಳಿತಾಯವಾಗುವಂತೆ ಮಾಡಿದ್ದೇವೆ ಎಂಬುದು ಸಾಬೀತಾಗುತ್ತದೆ. ಅಂದ ಹಾಗೆ ಈಗ ಕಲ್ಲಿದ್ದಲು ಹಗರಣದ ಕುರಿತು ನ್ಯಾಯಮೂರ್ತಿ ಮೋಹನ್‌ಕುಮಾರ್ ನೇತೃತ್ವದ ಸಮಿತಿ ತನಿಖೆ ನಡೆಸುತ್ತಿದೆ ಎಂದರು.
ಎಂಎಎಂ ರಾಮಸ್ವಾಮಿ ಯಾರು?ಎಂದು ಇದೇ ಸಂಧರ್ಭದಲ್ಲಿ ರೇವಣ್ಣ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಚುಚ್ಚಿದಾಗ, ಇಡೀ ಪ್ರಕರಣದ ಬಗ್ಗೆ ಸಮಗ್ರ ಚರ್ಚೆ ನಡೆಯಲಿ. ನೀವು ಯಾವ ಭೂತ ಬಿಟ್ಟರೂ ನಾನು ಹೆದರುವುದಿಲ್ಲ. ಅದೇನಿದ್ದರೂ ಯಡಿಯೂರಪ್ಪ ಅವರಿಗಾಗಬೇಕು ಎಂದರು.
ಇದರಿಂದ ಕೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ,ನಾವು ಕೊಟ್ಟ ಬೆಂಬಲವನ್ನು ವಾಪಸು ತೆಗೆದುಕೊಂಡಾಗ ಶೇಕಡಾ ಇಪ್ಪತ್ತಾರರಷ್ಟು ಹೆಚ್ಚಿನ ದರ ನಮೂದಿಸಿ ರಾಮಸ್ವಾಮಿ ಅವರಿಗೆ ಕಲ್ಲಿದ್ದಲು ಪೂರೈಸಲು ಅವಕಾಶ ಕೊಟ್ಟವರು ರೇವಣ್ಣ. ಹಗರಣ ಮಾಡಿದವರು ನೀವು. ವ್ಯವಹಾರ, ಒಳವ್ಯವಹಾರ ಮಾಡಿದವರು ನೀವು ಎಂದು ಟೀಕಿಸಿದರು.
ಒರಿಸ್ಸಾದ ತಲಚೇರಿಯಿಂದ ರಾಯಚೂರಿಗೆ ರೈಲಿನಲ್ಲಿ ತರಲು ಸಾಧ್ಯವಿದ್ದ ಕಲ್ಲಿದ್ದಲನ್ನು ಈ ರಾಮಸ್ವಾಮಿ ಮದ್ರಾಸ್ ಬಂದರಿಗೆ ಹಡಗು ಮೂಲಕ ತರುತ್ತಾರೆ. ಅಲ್ಲಿಂದ ರೈಲಿನಲ್ಲಿ ರಾಯಚೂರಿಗೆ ತರುತ್ತಾರೆ. ಇದಕ್ಕಾಗಿ ನಾವು ಟನ್‌ಗೆ ಒಂದು ಸಾವಿರ ರೂ ಜಾಸ್ತಿ ಬೆಲೆ ತೆರಬೇಕಾಯಿತು.
ಮುಂದೆ ನಮ್ಮ ತಪ್ಪಿಲ್ಲದೇ ಹೋದರೂ ಈ ರಾಮಸ್ವಾಮಿ ಬಾಡಿಗೆಗೆ ಹಡಗುಗಳು ಸಿಗುತ್ತಿಲ್ಲ ಎಂದು ಬಂದರಿನಲ್ಲೇ ಕಲ್ಲಿದ್ದಲನ್ನು ಬಿಡುತ್ತಾರೆ. ಇದನ್ನೇ ನಾವು ತನಿಖೆ ಮಾಡುತ್ತಿರುವುದು. ನೋಡೋಣ. ತನಿಖೆ ಮುಗಿಯಲಿ. ಯಾರ್‍ಯಾರ ಬಣ್ಣ ಏನು ಅನ್ನುವುದು ಬಯಲಾಗುತ್ತದೆ ಎಂದರು.
ಕಾಂಗ್ರೆಸ್ - ಜೆಡಿಎಸ್ ಸಭಾತ್ಯಾಗ:ರಾಜ್ಯದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗದೇ ವಿದ್ಯುತ್ ಸಮಸ್ಯೆ ಉಲ್ಬಣಗೊಳ್ಳಲು ಬಿಜೆಪಿ ಸರ್ಕಾರವೇ ಮೂಲ ಕಾರಣ. ರಾಜ್ಯ ಕತ್ತಲಲ್ಲಿ ಮುಳುಗುವಂತೆ ಮಾಡಲು ಈ ಸರ್ಕಾರವೇ ಕಾರಣ. ಅಲ್ಲದೇ ಕಲ್ಲಿದ್ದಲು ಹಗರಣದಲ್ಲಿ ಮುಖ್ಯಮಂತ್ರಿಯವರೇ ನೇರವಾಗಿ ಭಾಗಿಯಾಗಿರುವ ಕಾರಣದಿಂದ ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು. ಆದರೆ ಇದಕ್ಕೆ ಸಮ್ಮತಿ ಸೂಚಿಸದ ಯಡಿಯೂರಪ್ಪ ಅವರ ಧೋರಣೆಯನ್ನು ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಸಿಬಿಐ ತನಿಖೆಗೆ ಒಪ್ಪದ ಮುಖ್ಯಮಂತ್ರಿ ಅವರ ನಿಲುವನ್ನು ಪ್ರತಿಭಟಿಸಿ ಜೆಡಿಎಸ್ ಸದಸ್ಯರು ಕೂಡ ಪ್ರತ್ಯೇಕವಾಗಿ ಸಭಾತ್ಯಾಗ ಮಾಡಿದರು.
ಇದಕ್ಕೂ ಮುನ್ನ ಇಂದು ಬೆಳಿಗ್ಗೆ ನಿಯಮ ೬೯ ರ ಅಡಿ ಚರ್ಚೆ ಆರಂಭಿಸಿದ ರೇವಣ್ಣ, ಬಿಜೆಪಿ ಸರ್ಕಾರದ ಅವಧಿಯಲ್ಲಿ ೫೦೦ ಕೋಟಿ ರೂಗಳ ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಖರೀದಿ ಹಗರಣ ನಡೆದಿದ್ದು ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು,ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ನಾವು ಅಧಿಕಾರಲ್ಲಿದ್ದಾಗ ಕಡಿಮೆ ಬೆಲೆಗೆ ವಿದ್ಯುತ್ ಖರೀದಿ ಮಾಡುವ ಸಂಬಂಧ ಖಾಸಗಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದೆವು.ಆದರೆ ಇವರು ಅದನ್ನು ಉಲ್ಲಂಘಿಸಿ ೨೫೦೦ ಕೋಟಿ ರೂ ನೀಡಿ ದುಬಾರಿ ಬೆಲೆಯ ವಿದ್ಯುತ್ ಖರೀದಿಸಿದ್ದಾರೆ. ಇದರ ಹಿಂದೆ ಭಾರೀ ಹಗರಣ ನಡೆದಿದೆ ಎಂದರು.
ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ ಅವರು,ಹೀಗೆ ದುಬಾರಿ ಬೆಲೆಗೆ ವಿದ್ಯುತ್ ಖರೀದಿಸುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದರು.
ಇವತ್ತು ಮಾತೆತ್ತಿದರೆ ಹಿಂದಿನ ಸರ್ಕಾರಗಳು ವಿದ್ಯುತ್ ಉತ್ಪಾದಿಸಿದ್ದರೆ ರಾಜ್ಯಕ್ಕೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಯಡಿಯೂರಪ್ಪ ಹೇಳುತ್ತಾರೆ.ಆದರೆ ಹಿಂದಿನ ಸರ್ಕಾರಗಳು ವಿದ್ಯುತ್ ಉತ್ಪಾದನೆ ಮಾಡದೇ ಎಲ್ಲಿಂದ ವಿದ್ಯುತ್ ಬರುತ್ತಿದೆ?ಎಂದು ಪ್ರಶ್ನಿಸಿದರು.
ಈ ಸಂಧರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ,ನೀವು ಅಧಿಕಾರದಲ್ಲಿದ್ದ ಪ್ರತಿಯೊಂದು ವರ್ಷದಲ್ಲಿ ಎಷ್ಟು ವಿದ್ಯುತ್‌ನ್ನು ಉತ್ಪಾದನೆ ಮಾಡಿದಿರಿ ಎಂಬುದನ್ನು ಹೇಳಿ ಅಂತ ಸವಾಲೆಸೆದರು.
ಇದಕ್ಕೆ ಪ್ರತ್ಯುತ್ತರ ನೀಡಿದ ರೇವಣ್ಣ,ವರಾಹಿ ಯೋಜನೆಯಿಂದ ಇವತ್ತು ೨೮೦ ಮೆಗಾವ್ಯಾಟ್ ವಿದ್ಯುತ್ ಸಿಗುತ್ತಿದೆಯಲ್ಲ?ಅದು ಯಾರ ಕಾಲದ್ದು?ಬಳ್ಳಾರಿ ಮೊದಲ ಹಂತ ಹಾಗೂ ಎರಡನೇ ಹಂತದ ಯೋಜನೆಯಿಂದ ತಲಾ ೫೦೦ ಮೆಗಾವ್ಯಾಟ್ ವಿದ್ಯುತ್ ಸಿಗುತ್ತದಲ್ಲ ಅದು ಯಾರ ಕಾಲದಲ್ಲಿ ಆದದ್ದು ಎಂದು ಪ್ರಶ್ನಿಸಿದರು.
ರಾಯಚೂರು ಎಂಟನೇ ಘಟಕವೂ ನಮ್ಮ ಕಾಲದಲ್ಲೇ ಆಗಿದ್ದು, ೧೦೦೦ ಮೆಗಾವ್ಯಾಟ್‌ನ ನಾಗಾರ್ಜುನ ಯೋಜನೆಯನ್ನು ಜಾರಿಗೊಳಿಸಲು ಹೊರಟಿದ್ದೂ ನಾವೇ ಎಂದರು.
ಇಷ್ಟೆಲ್ಲ ಮಾಡಿದರೂ ನಿಮ್ಮ ಕಾಲದಲ್ಲಿ ಏನು ಮಾಡಿದಿರಿ?ದೇವೇಗೌಡರ ಕಾಲದಲ್ಲಿ ಏನು ಮಾಡಿದರು?ಎಂದು ಪ್ರಶ್ನಿಸುತ್ತಿದ್ದಾರೆ.ದೇವೇಗೌಡರು ರಾಜ್ಯದಲ್ಲಿ ೮೫೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಅಗತ್ಯವಾದ ಯೋಜನೆಗಳನ್ನು ಜಾರಿಗೊಳಿಸಲು ಹೊರಟಿದ್ದರು.ಆದರೆ ಅದಕ್ಕೆ ತಡೆಯೊಡ್ಡಿದ್ದು ನಿಮ್ಮದೇ ಎನ್‌ಡಿಎ ಸರ್ಕಾರ ಎಂದು ಆರೋಪಿಸಿದರು.
ಕೊಜೆಂಟ್ರಿಕ್ಸ್ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ದೇವೇಗೌಡರು ಮಾರ್ಗ ತೋರಿಸಿದರೆ ವಾಜಪೇಯಿ ನೇತೃತ್ವದ ಸರ್ಕಾರ ಇದಕ್ಕೆ ಅವಕಾಶ ನೀಡಲಿಲ್ಲ.
ಇವತ್ತು ಯುಪಿಎ ಸರ್ಕಾರವಾದರೂ ರಾಜ್ಯದಲ್ಲಿ ೪೦೦೦ ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.ಆದರೆ ನಿಮ್ಮದೇ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಏನು ಮಾಡಿತು?ಎಂದು ಪ್ರಶ್ನಿಸಿದರು.
ಅವತ್ತು ದೇವೇಗೌಡರ ಕೆಲಸಕ್ಕೆ ನಿಮ್ಮ ಎನ್‌ಡಿಎ ಸರ್ಕಾರ ಬೆಂಬಲ ಕೊಟ್ಟಿದ್ದರೆ ಇವತ್ತು ರಾಜ್ಯ ಈ ತರ ವಿದ್ಯುತ್ ಕೊರತೆಯನ್ನು ಎದುರಿಸುತ್ತಿರಲಿಲ್ಲ ಅಂತ ರೇವಣ್ಣ ಆರೋಪ ಮಾಡಿದರು.
ನೀವು ಹೊಸತಾಗಿ ವಿದ್ಯುತ್ ಉತ್ಪಾದಿಸಲಿಲ್ಲ.ನಿಮ್ಮ ಎನ್‌ಡಿಎ ಸರ್ಕಾರವೂ ರಾಜ್ಯಕ್ಕೆ ಅನುಕೂಲ ಮಾಡಿಕೊಡಲಿಲ್ಲ.ಇವತ್ತು ಇದೆಲ್ಲದರ ಪರಿಣಾಮವಾಗಿ ರಾಜ್ಯದ ರೈತರು,ವಿದ್ಯಾರ್ಥಿಗಳು,ಕೈಗಾರಿಕೆಗಳು ಸಂಕಷ್ಟದಲ್ಲಿ ಸಿಲುಕುವಂತಾಗಿದೆ ಎಂದರು.
ಕಲ್ಲಿದ್ದಲು ಖರೀದಿಯಲ್ಲೂ ನಿಮ್ಮ ಸರ್ಕಾರ ಹಗರಣ ಮಾಡಿದೆ.ಸ್ವತ: ಮುಖ್ಯಮಂತ್ರಿಗಳೇ ಇದರಲ್ಲಿ ಪಾಲುದಾರರಾಗಿದ್ದಾರೆ ಎಂದು ರೇವಣ್ಣ ಆರೋಪ ಮಾಡಿದಾಗ ಆಡಳಿತ ಪಕ್ಷದವರು ಇದನ್ನು ತೀವ್ರವಾಗಿ ಪ್ರತಿಭಟಿಸಿದರು.ಈ ಹಂತದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಮಧ್ಯೆ ತೀವ್ರ ಸ್ವರೂಪದ ಮಾತಿನ ಚಕಮಕಿ ನಡೆಯಿತು.
ಮುಂದುವರಿದು ಮಾತನಾಡಿದ ಹೆಚ್.ಡಿ.ರೇವಣ್ಣ,ಕಲ್ಲಿದ್ದಲು ಹಗರಣದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದೀರಲ್ಲ?ಅದರಲ್ಲಿ ಮುಖ್ಯಮಂತ್ರಿಗಳನ್ನೂ ಸೇರಿಸಿ.ಇಡೀ ಹಗರಣದ ಬಗ್ಗೆ ಸಿಬಿಐ ಇಲ್ಲವೇ ಲೋಕಾಯುಕ್ತರಿಂದ ತನಿಖೆ ನಡೆಸಿ ಎಂದು ಒತ್ತಾಯಿಸಿದಾಗ ಪುನ: ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.



del.icio.us
Digg
Comments (0 posted):
Post your comment