Home | ರಾಜ್ಯ ವಾರ್ತೆ | ಹುಬ್ಬಳ್ಳಿ | ಹುಬ್ಬಳ್ಳಿ: ಕುರಿ ದೊಡ್ಡಿಯಂತಾಗಿರುವ ರಾಣಿ ಚನ್ನಮ್ಮ ಶಾಲೆಹಳು......

ಹುಬ್ಬಳ್ಳಿ: ಕುರಿ ದೊಡ್ಡಿಯಂತಾಗಿರುವ ರಾಣಿ ಚನ್ನಮ್ಮ ಶಾಲೆಹಳು......

Font size: Decrease font Enlarge font

ಬೊಕ್ಕಸವನ್ನೆಲ್ಲ ಖಾಲಿ ಮಾಡಿಕೊಂಡು, ಆಂತರಿಕ ಕಚ್ಚಾಟಗಳಿಂದ ನೆರೆ ಪರಿಹಾರ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಮಾಡಿ ದುರ್ಬಲ ಮಂತ್ರಿಗಳಿಂದ ಆಡಳಿತ ನಡೆಸುತ್ತ, ನಾಡಿನ ಜನತೆಗಿಂತ ಮಠಾಧಿಪತಿಗಳೇ ಮುಖ್ಯ ಎಂದು ಅವರ ಸೇವೆ ಮಾಡುತ್ತಿರುವ ಯಡ್ಯೂರಪ್ಪನವರಿಗೆ ಶಿಕ್ಷಣ ಕ್ಷೇತ್ರದತ್ತ ಗಮನ ಹರಿಸಲು ಪುರುಸೊತ್ತು ಇಲ್ಲದಂತೆ ಕಾಣುತ್ತಿದೆ. ಪರಿಮಾಣಾತ್ಮಕ, ಗುಣಾತ್ಮಕ, ನೈಜ ಶಿಕ್ಷಣ ಕೊಡದೇ ಇಡೀ ಶಿಕ್ಷಣ ಕ್ಷೇತ್ರಕ್ಕೆ ಕೇಸರಿ ಲೇಪನ ನಡೆಯುತ್ತಿರುವಾಗಲೇ ಕೇಂದ್ರೀಯ ಶಾಲೆಗಳಿಗೆ ಪರ್ಯಾಯ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆಶಾಕಿರಣ ಎಂದು ಬಿಂಬಿಸಿ ಆರು ತಿಂಗಳ ಹಿಂದಷ್ಟೆ ಆರಂಭಿಸಿದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳು ದುಸ್ಥಿತಿಯ ಹಾದಿ ಹಿಡಿದಿವೆ.

 

 

ಕಳೆದ ವರ್ಷ ಆಗಸ್ಟ್ ತಿಂಗಳ ಆಸಿಪಾಸಿನಲ್ಲಿ ರಾಜ್ಯ ಸರ್ಕಾರ ಜಿಲ್ಲೆಗೆ ಒಂದೆರಡರಂತೆ ರಾಜ್ಯಾದ್ಯಂತ ಕಿತ್ತೂರು ರಾಣಿ ಚನ್ನಮ್ಮ ಹೆಸರಿನ 114 ವಸತಿ ಶಾಲೆಗಳನ್ನು (ಆಂಗ್ಲ ಮಾಧ್ಯಮ) ಆರಂಭಿಸಿದ್ದು, ತರಾತುರಿಯಲ್ಲಿ ಆರಂಭಗೊಂಡ ಈ ಶಾಲೆಗಳು ಗೋದಾಮು, ಹಳೆಯ ಮನೆ ಹಾಗೂ ಕಲ್ಯಾಣಮಂಟಪದಂತಹ ಯಾವದ್ಯಾವದೋ ಕಟ್ಟಡಗಳಲ್ಲಿ, ಕಲಿಕೆಗೆ ಸೂಕ್ತವಲ್ಲದ ಪರಿಸರದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ.

 

 

ಅದಾಗ್ಯೂ ಕಲಿಕೆಯನ್ನು ಸುಲಭಗೊಳಿಸಲು, ಬೋಧನಾ, ಕಲಿಕಾ ಪ್ರಕ್ರಿಯೆ ಯಶಸ್ವಿಯಾಗಲು ಅಗತ್ಯವಾಗಿ ಬೇಕಾದ ಪಠ್ಯಪುಸ್ತಕವಾದ್ರು ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ. ಕೆಲವು ಶಾಲೆಗಳಲ್ಲಂತೂ ಅವಶ್ಯವಾಗಿ ಬೇಕಾದ ಕಪ್ಪು ಹಲಗೆ ಇಲ್ಲದೆ ಶಿಕ್ಷಕರು ದೊಂಬರಾಟ ಆಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮಕಾರಿಯಾಗಿ ಕಲಿಸಬೇಕೆನ್ನುವ ಶಿಕ್ಷಕರಿಗೆ ಈ ವ್ಯವಸ್ಥೆ ಸಹಜವಾಗಿಯೇ ನಿರಾಸೆಯನ್ನುಂಟುಮಾಡುತ್ತಿದೆ.

 

ಕುರಿದೊಡ್ಡಿ ವಸತಿ ಶಾಲೆಗಳೆಂದು ಆರಂಭಗೊಂಡ ಇವು ಬೋಧನೆಗೆ, ವಸತಿಗೆಂದು ಪ್ರತ್ಯೇಕ ಕೊಠಡಿಗಳು ಇಲ್ಲದಂತಾಗಿವೆ. ಈ ಮೊದಲೇ ಹೇಳಿದಂತೆ ಗೋದಾಮು, ಮನೆಗಳು ಹಾಗೂ ಕಲ್ಯಾಣಮಂಟಪದಲ್ಲಿ ಕಲಿಕೆ ನಡೆಯುತ್ತಿದ್ದು ಆಟ, ಪಾಠ, ಮಲಗುವುದು, ಓದುವುದು ಎಲ್ಲ ಅಲ್ಲಿಯೇ ಎಂಬಂತಾಗಿ ಕುರಿದೊಡ್ಡಿಗಳ ನೆನಪಾಗುವಂತಾಗಿದೆ.

ಇನ್ನು ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ, ಶುದ್ಧವಾದ ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಠ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳು ಪದೇ ಪದೇ ಆರೋಗ್ಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ಬೆಳವಣಿಗೆ ಹಂತದಲ್ಲಿರುವ ಮಕ್ಕಳಿಗೆ ಪಾಠದಷ್ಟೆ ಮುಖ್ಯ ಆಟ. ಆದರೆ ಆಟದ ಮೈದಾನಗಳಲ್ಲದೆ ಅವರ ಕ್ರಿಯಾಶೀಲತೆಯು ಮಾಯವಾಗುವ ಆತಂಕ ಶುರುವಾಗಿದೆ.

ಬಹುತೇಕ ಗ್ರಾಮೀಣ ಭಾಗಗಳಲ್ಲಿ ಪ್ರಾರಂಭವಾದ ಈ ಶಾಲೆಗಳಲ್ಲಿ ಆಗಾಗ್ಗೆ ವಿದ್ಯುತ್ ಸಮಸ್ಯೆ ಎದುರಾಗುವುದರಿಂದ ರಾತ್ರಿ ಮೇಣದ ಬತ್ತಿಯಂತ ಕನಿಷ್ಠ ಸೌಲಭ್ಯಗಳು ಇಲ್ಲದಾಗಿವೆ. ಈ ಎಲ್ಲಾ ಸಮಸ್ಯೆಗಳನ್ನು ಅನುಭವಿಸಿದ ಮಕ್ಕಳಲ್ಲಿ ಕೆಲವರು ಶಿಕ್ಷಣವನ್ನು ಮೊಟಕುಗೊಳಿಸಿ ಊರ ದಾರಿ ಹಿಡಿಯುತ್ತಿದ್ದಾರೆ. ಹೊಸ ಇಂಗ್ಲಿಷ್ ಶಾಲೆಗಳೆಂದು ಬಹು ನಿರೀಕ್ಷೆಯಿಂದ ಇದ್ದ ಪಾಲಕರಿಗೆ ದಿಕ್ಕೇ ತೋಚದಂತಾಗಿದೆ.

 

ಲಂಚಾವತಾರ

 

ರಾಜ್ಯದ 114 ವಸತಿ ಶಾಲೆಗಳಿಗೂ ಶಿಕ್ಷಕರು, ವಾರ್ಡನ್ ಒಳಗೊಂಡಂತೆ ಎಲ್ಲ ಸಿಬ್ಬಂದಿಗಳ ನೇಮಕಾತಿಯನ್ನು ಸರ್ಕಾರವೇ ನೇರವಾಗಿ ಮಾಡದೆ ಕಿಯೋನಿಕ್ಸ್ ಎಂಬ ಹೆಸರಿನ ಎನ್ಜಿಒ ಗೆ ಕೊಡಲಾಗಿದ್ದು ಅವು ಜಿಲ್ಲೆಗೊಂದರಂತೆ ಶಾಲೆಗಳನ್ನು ಹೊಂದಿದ್ದು ಆಯಾ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಎಲ್ಲ ರಾಣಿಚನ್ನಮ್ಮ ವಸತಿ ಶಾಲೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಈ ಎನ್.ಜಿ.ಒ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುತ್ತಿವೆ.

 

ಈ ಎನ್.ಜಿ.ಒ. ಗಳು ನೇಮಕಾತಿ ಸಂದರ್ಭದಲ್ಲಿ ಪ್ರಾಂಶುಪಾಲರ ಅಡುಗೆ 30 ಸಾವಿರ, ಸಹ ಶಿಕ್ಷಕರ ಹುದ್ದೆಗೆ 20 ಸಾವಿರದಂತೆ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿಯಿಂದ ಲಂಚ ಪಡೆದು ಹುದ್ದೆಗಳ ಮಾರಾಟ ಮಾಡುತ್ತಿವೆ. ಇನ್ನು ಕೆಲವು ಜಿಲ್ಲೆಯ ಎನ್.ಜಿ.ಒ ಗಳಂತೂ ಹೋಟೆಲ್ನ ರೇಟ್ಬೋರ್ಡನಂತೆ ಬೋರ್ಡ್ ನೇತುಹಾಕಿವೆ ಎಂಬ ಸುದ್ದಿಯೂ ಇದೆ.

ಕೆಲಸದ ಆಸೆಗಾಗಿ ಎಷ್ಟೋ ಜನ ಸಾಲಸೋಲ ಮಾಡಿ ಕೇಳಿದಷ್ಟು ಹಣವನ್ನು ಕೊಟ್ಟು ಕೆಲಸಕ್ಕೆ ಸೇರಿಕೊಂಡರೆ ಯಾವ ಸಿಬ್ಬಂದಿಗೂ 6 ತಿಂಗಳಿಂದ ಸಂಬಳ ಸಿಕ್ಕಿಲ್ಲ. ವಾಸ್ತವವಾಗಿ ಪ್ರತಿ ತಿಂಗಳು ಸಿಬ್ಬಂದಿಗೆ ಸಂಬಳ ಕೊಡಬೇಕೆಂದು ಸರ್ಕಾರ ಎನ್.ಜಿ.ಓ.ಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಗಾಳಿಗೆ ತೂರಿವೆ.

 

ರಾಜ್ಯದ ಸಮಾಜಕಲ್ಯಾಣ ಇಲಾಖೆಯ ಅಡಿಯಲ್ಲಿ ಈ ಹಿಂದಿನಿಂದಲೇ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಗತಿ ಕುಂಟುತ್ತಾ ಸಾಗಿದ್ದು, ಈಗ ಅದೇ ಸಮಾಜಕಲ್ಯಾಣ ಇಲಾಖೆಯ ಅಡಿಯಲ್ಲಿಯೇ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ.

 

ಸಮಾಜ ಕಲ್ಯಾಣ ಇಲಾಖೆಯಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ, ರಾಜ್ಯದ ಶಿಕ್ಷಣದ ಜವಾಬ್ದಾರಿ ಹೊತ್ತ ಮಂತ್ರಿಗಳು ತೋರುತ್ತಿರುವ ನಿರ್ಲಕ್ಷ್ಯದಿಂದ ಈ ಶಾಲೆಗಳು ಹೊರಬರಬೇಕಾಗಿದೆ. ಕೂಡಲೇ ಮೂಲಭೂತ ಸೌಕರ್ಯಗಳತ್ತ ಗಮನಹರಿಸಿ ವಿದ್ಯಾರ್ಥಿಗಳಿಗೆ ಚಂದದ ಬದುಕು ಕಟ್ಟಿಕೊಡುವಲ್ಲಿ ಶಿಕ್ಷಣವನ್ನು ಮುನ್ನಡೆಸಬೇಕಾಗಿದೆ.

 

 

-ರವೀಂದ್ರ ಹೊನವಾಡ, ಗದಗ

 

 

ಸೌಜನ್ಯ: ಜನಶಕ್ತಿ

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org