Home | ರಾಜ್ಯ ವಾರ್ತೆ | ಬೆಳಗಾವಿ | ಬೆಂಗಳೂರು: ನೆರೆಸಂತ್ರಸ್ತರಿಗೆ ಮನೆ - ಸಮರೋಪಾದಿಯಲ್ಲಿ ನಡೆಯುತ್ತಿರುವ ಕಾರ್ಯ

ಬೆಂಗಳೂರು: ನೆರೆಸಂತ್ರಸ್ತರಿಗೆ ಮನೆ - ಸಮರೋಪಾದಿಯಲ್ಲಿ ನಡೆಯುತ್ತಿರುವ ಕಾರ್ಯ

Font size: Decrease font Enlarge font

ಬೆಂಗಳೂರು,ಮಾರ್ಚ್ 8: ನೆರೆಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದ್ದು ಆದಷ್ಟೂ ಶೀಘ್ರವಾಗಿ ಈ ಕಾರ್ಯ ಪೂರ್ಣವಾಗಲಿದೆ ಎಂದು ಕಂದಾಯ ಸಚಿವ ಕರುಣಾಕರರೆಡ್ಡಿ ಭರವಸೆ ನೀಡಿದ್ದಾರೆ.

 

ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎನ್.ಎ.ಹ್ಯಾರೀಸ್,ಜಯಚಂದ್ರ ಮತ್ತಿತರರ ಪ್ರಸ್ತಾಪಕ್ಕೆ ಉತ್ತರ ನೀಡಿದ ಅವರು ಈ ಭರವಸೆ ನೀಡಿದರು.

ನೆರೆಪೀಡಿತ ಪ್ರದೇಶಗಳ ಮುನ್ನೂರಾ ಐದು ಗ್ರಾಮಗಳನ್ನು ಸ್ಥಳಾಂತರಿಸಿ ೬೩,೨೧೩ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಉದ್ದೇಶಿಸಿದ್ದು ಈ ಪೈಕಿ ಈಗಾಗಲೇ ೨೮೮ ಗ್ರಾಮಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.

 

ಈ ಪ್ರದೇಶವನ್ನು ಎಪ್ಪತ್ತೇಳು ಮಂದಿ ದಾನಿಗಳಿಗೆ ವಹಿಸಿಕೊಡಲಾಗಿದ್ದು ಅಲ್ಲಿ ಈ ದಾನಿಗಳು ತ್ವರಿತವಾಗಿ ಮನೆ ಕಟ್ಟಿಕೊಡಲಿದ್ದಾರೆ.ಅದಾಗಲೇ ೨೪೯ ಗ್ರಾಮಗಳಲ್ಲಿ ಬಡಾವಣೆಗಳನ್ನು ನಿರ್ಮಿಸಲಾಗಿದ್ದು ಹಿಂದೆ ಯಾವ ಸಂಧರ್ಭಗಳಲ್ಲೂ ಪ್ರಕೃತಿ ವಿಕೋಪಗಳು ನಡೆದಾಗ ಇಷ್ಟು ಸಮರೋಪಾದಿಯಲ್ಲಿ ಕೆಲಸ ಆಗಿರಲಿಲ್ಲ.

 

ಈ ಮಧ್ಯೆ ಹಲವು ಕಡೆ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು ಮುಂದಿನ ಮಳೆಗಾಲ ಆರಂಭವಾಗುವುದರೊಳಗೆ ಮನೆ ಕಟ್ಟಿಕೊಡುವ ಕಾರ್ಯ ಪೂರ್ಣವಾಗಲಿದೆ ಎಂದರು.

ಹಲವು ಕಡೆ ಒಂದು ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಬೇಕೆಂದರೂ ವೆಚ್ಚ ಇನ್ನೂ ಹೆಚ್ಚಾಗುತ್ತಿದೆ.ಆದರೂ ದಾನಿಗಳು ಹೆಚ್ಚುವರಿ ಹಣ ಹಾಕಿ ಮನೆಗಳನ್ನು ಕಟ್ಟಿಕೊಡುತ್ತಿದ್ದಾರೆ ಎಂದು ವಿವರ ನೀಡಿದರು.

 

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಸದಸ್ಯ ಎನ್.ಎ.ಹ್ಯಾರೀಸ್,ಮಳೆ ಬಂದು ಆರು ತಿಂಗಳು ಕಳೆದರೂ ನೆರೆಪೀಡಿತ ಪ್ರದೇಶಗಳಲ್ಲಿ ಸರ್ಕಾರ ಇನ್ನೂ ಒಂದು ಮನೆ ಕಟ್ಟಿಲ್ಲ ಎಂದು ಆರೋಪಿಸಿದರು.

 

ಮಾತಾ ಅಮೃತಾನಂದಮಯಿ ಅವರು ಕಟ್ಟಿ ಕೊಟ್ಟ ನೂರು ಮನೆಗಳನ್ನು ಹೊರತು ಪಡಿಸಿದರೆ ಇನ್ನೂ ಒಂದು ಮನೆ ಕಟ್ಟಿಲ್ಲ ಎಂದರೆ ಸಂತ್ರಸ್ತರ ಗತಿ ಏನಾಗಬೇಕು?ಕಳೆದ ಆರು ತಿಂಗಳಿಂದ ಅವರ ಪರಿಸ್ಥಿತಿ ಹೇಗಿದೆ?ಎಂದು ಪ್ರಶ್ನಿಸಿದರು.

 

ಕೇಂದ್ರ ಸರ್ಕಾರದಿಂದ ನಿಮಗೆ ಸಾವಿರದ ಐನೂರು ಕೋಟಿ ರೂಪಾಯಿ ಬಂದಿದೆ.ಸಾರ್ವಜನಿಕರಿಂದ ಹಣ ಬಂದಿದೆ.ಆದರೆ ಇನ್ನೂ ನೀವು ಒಂದು ಮನೆ ಕಟ್ಟಿಲ್ಲ ಎಂದರೆ ಏನರ್ಥ?ಅಂತ ಪ್ರಶ್ನಿಸಿದರು.

ಅವರ ಮಾತಿಗೆ ಧ್ವನಿಗೂಡಿಸಿದ ಕಾಂಗ್ರೆಸ್ ಉಪನಾಯಕ ಟಿ.ಬಿ.ಜಯಚಂದ್ರ, ಸರ್ಕಾರ ತನ್ನ ಬಜೆಟ್‌ನಲ್ಲಿ ವಿವರ ನೀಡುವಾಗ ನೆರೆಪೀಡಿತ ಪ್ರದೇಶಗಳಲ್ಲಿ ಎಪ್ಪತ್ತೈದು ಸಾವಿರ ಮನೆ ಕಟ್ಟಿಕೊಡುವುದಾಗಿ ಹೇಳಿದೆ.ಆದರೆ ಕಂದಾಯ ಸಚಿವರು ತಮ್ಮ ಉತ್ತರದಲ್ಲಿ ೬೩,೨೧೩ ಮನೆಗಳನ್ನು ಕಟ್ಟಿಕೊಡುವುದಾಗಿ ಹೇಳಿದ್ದಾರೆ.ಈ ಪೈಕಿ ಯಾವುದು ನಿಜ?ಯಾವುದು ಸುಳ್ಳು?ಎಂದು ಪ್ರಶ್ನಿಸಿದರು.

 

ರಾಜ್ಯ ಸರ್ಕಾರ ಸಂಧರ್ಭ ಬಂದಾಗಲೆಲ್ಲ ಕೇಂದ್ರ ಸರ್ಕಾರದ ಮೇಲೆ‌ಆರೋಪ ಮಾಡುತ್ತದೆ. ಆದರೆ ಕೇಂದ್ರದಿಂದ ಹಣ ಬಂದಿದೆ. ಆದರೆ ಇನ್ನೂ ನೆರೆಪೀಡಿತ ಪ್ರದೇಶಗಳ ಜನರಿಗೆ ಇನ್ನೂ ಮನೆ ಕಟ್ಟಿಕೊಡುವ ಕೆಲಸವಾಗಿಲ್ಲ ಎಂದು ಟೀಕೆ ಮಾಡಿದರು.

 

ಕಾಂಗ್ರೆಸ್ ಸದಸ್ಯ ಸಿ.ಎಸ್.ನಾಡಗೌಡ ಮಾತನಾಡಿ:ನೆರೆಪೀಡಿತ ಪ್ರದೇಶಗಳಲ್ಲಿ ನೀವು ಹೇಳಿದ ಪ್ರಮಾಣದ ಮನೆಗಳನ್ನು ಕಟ್ಟಲು ಆರು ನೂರು ಕೋಟಿ ರೂಗಳು ಬೇಕು.ಆದರೆ ನೀವು ಇನ್ನೂ ಮನೆಗಳನ್ನು ಕಟ್ಟಲು ಯಶಸ್ವಿಯಾಗಿಲ್ಲ ಎಂದರೆ ಅದರರ್ಥವೇನು?ಎಂದು ಪ್ರಶ್ನೆ ಮಾಡಿದರು.

 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org