Home | ರಾಜ್ಯ ವಾರ್ತೆ | ಬೆಳಗಾವಿ | ಗದಗ: ೨೨೨ ಜನರಿಗೆ ಉದ್ಯೋಗವಕಾಶ

ಗದಗ: ೨೨೨ ಜನರಿಗೆ ಉದ್ಯೋಗವಕಾಶ

Font size: Decrease font Enlarge font

ಗದಗ (ಕರ್ನಾಟಕ ವಾರ್ತೆ) ಮಾರ್ಚ ೫ : ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಕಳೆದ ಫೆಬ್ರುವರಿ ತಿಂಗಳಲ್ಲಿ ೨೦ ಮಹಿಳೆಯರು ಸೇರಿದಂತೆ ಒಟ್ಟು ೨೨೨ ಅಭ್ಯರ್ಥಿಗಳು ಉದ್ಯೋಗವಕಾಶ ಪಡೆದುಕೊಂಡಿದ್ದಾರೆ. ಸದರಿ ತಿಂಗಳಲ್ಲಿ ೧೩೭ ಅಭ್ಯರ್ಥಿಗಳು ಉದ್ಯೋಗವಕಾಶಕ್ಕಾಗಿ ಹೆಸರು ನೋಂದಾಯಿಸಿದ್ದು, ಫೆಬ್ರುವರಿ ತಿಂಗಳ ಅಂತ್ಯಕ್ಕೆ ಜಿಲ್ಲೆಯಲ್ಲಿ ೧೮೨೫ ಮಹಿಳೆಯರು ಸೇರಿದಂತೆ ಒಟ್ಟಾರೆ ೫೮೮೨ ಅಭ್ಯರ್ಥಿಗಳು ಉದ್ಯೋಗ ನಿರೀಕ್ಷೆಯಲ್ಲಿರುವದಾಗಿ ಉದ್ಯೋಗ ವಿನಿಮಯ ಕಚೇರಿಯ ವರದಿಯಲ್ಲಿ ತಿಳಿಸಿದ್ದಾರೆ.

 

ಪತ್ರಿಕಾ ಪ್ರಕಟಣೆ ದಿನಾಂಕ: ೦೬-೦೩-೨೦೧೦

ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸಲು ಸರಕಾರ ಗಂಭೀರ ನಿಲುವು ತಾಳಬೇಕು

- ನಾಡೋಜ ಡಾ|| ಪಾಟೀಲ ಪುಟ್ಟಪ್ಪ ಆಗ್ರಹ

 

ವಿಜಾಪುರ, ಮಾರ್ಚ ೬ - ಆಡಳಿತದಲ್ಲಿ ಕನ್ನಡಭಾಷೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾದ ನಿಲುವುಗಳನ್ನು ತಾಳಬೇಕು ಎಂದು ಖ್ಯಾತ ಪತ್ರಕರ್ತ ನಾಡೋಜ ಡಾ|| ಪಾಟೀಲ ಪುಟ್ಟಪ್ಪ ಆಗ್ರಹ ಪಡಿಸಿದರು.

ಬಸವಣ್ಣರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಜರುಗಿದ ವಿಜಾಪುರ ಜಿಲ್ಲಾ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ವಾಹನಗಳಮೇಲೆ ಕನ್ನಡ ನಾಮಫಲಕ ಅಂಕಿಗಳನ್ನು ಬರೆಸಿದ ಮಾತ್ರಕ್ಕೆ ಕನ್ನಡ ಉದ್ಧಾರವಾಗುವುದಿಲ್ಲ ಇದು ಮೂರ್ಖತನವಾಗಿದೆ ಎಂದು ನುಡಿದರು.

ಕನ್ನಡದ ಬೆಳವಣಿಗೆಗೆ ಸರ್ಕಾರ ದೃಢವಾದ ನಿಲುವು ತಾಳಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರ ನೇಮಕಾತಿ ಶಿಕ್ಷಕರ ತರಬೇತಿ ಕೋರ್ಸಿನಲ್ಲಿ ಕನ್ನಡ ಭಾಷಾ ಪಠ್ಯದ ಅಳವಡಿಕೆ, ಕನ್ನಡ ಭಾಷಾ ಪ್ರಾಚೀನತೆ ಕುರಿತಂತೆ ಸಂಶೋಧನೆ, ತಮಿಳುನಾಡು ಲೋಕಸೇವಾ ಆಯೋಗದ ಮಾದರಿಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿಯಲ್ಲಿ ಕನ್ನಡ ಭಾಷೆಬರುವ ಅಧಿಕಾರಿಗಳ ನೇಮಕಾತಿ, ಸರಕಾರಿ ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಅಂಕಿಸಂಖ್ಯೆ ಬಳಕೆ ಕುರಿತಂತೆ ದೃಢವಾದ ನಿಲುವು ತಾಳಬೇಕೆಂದು ಅಭಿಪ್ರಾಯಿಸಿದರು.

ಕರ್ನಾಟಕ ರಾಷ್ಟ್ರದ ಅತ್ಯಂತ ಸುಂದರ ತಾಣ. ಹಾಗೆಯೇ ಕನ್ನಡ ಭಾಷೆಯು ಭಾರತೀಯ ಭಾಷೆಗಳಲ್ಲಿ ತಮಿಳು ಹೊರತುಪಡಿಸಿದರೆ ಅತ್ಯಂತ ಪ್ರಾಚೀನ ಭಾಷೆ ಹಾಗೂ ದೇಶದ ಇತರ ಭಾಷೆಗಿಂತ ಹೆಚ್ಚು ರಾಜ್ಯಗಳಲ್ಲಿ ಕನ್ನಡ ಭಾಷೆ ಪ್ರಚಲಿತವಾಗಿದೆ. ಬ್ರಿಟೀಷ್ ಆಡಳಿತದಲ್ಲಿ ಮುಂಬಯಿ ಪ್ರಾಂತ್ಯದಲ್ಲಿ ಕನ್ನಡದಲ್ಲಿ ಮನವಿ ಪತ್ರ ಸ್ವೀಕರಿಸಲಾಗುತ್ತಿತ್ತು. ಇಂಡಿಯಾ ಹೌಸ್‌ನಲ್ಲಿರುವ ಕ್ರಿ.ಶ. ೧೬೬೬ರಲ್ಲಿ ಬ್ರಿಟೀಷ್ ಸರಕಾರ ಹೊರಡಿಸಿರುವ ಜಾಹೀರನಾಮೆಯು ಕನ್ನಡದಲ್ಲಿ ವ್ಯವಹರಿಸಬೇಕೆಂಬ ಐತಿಹ್ಯವಿದೆ ಎಂದು ಕನ್ನಡದ ಪ್ರಾಚೀನತೆ ಕುರಿತಂತೆ ವಿವರಿಸಿದರು.

ಕಾವೇರಿಯಿಂದ ಗೋದಾವರಿಯವರೆಗೆ ಹರಡಿರುವ ಪ್ರಾಚೀನ ಕನ್ನಡ ನಾಡಿನ ಭಾಗದಲ್ಲಿ ಮಹಾರಾಷ್ಟ್ರದ ಬಹುಭಾಗ ಸೇರಿಕೊಂಡಿವೆ. ಈ ಭಾಗದಲ್ಲಿ ಕನ್ನಡ ಹೆಸರಿನ ಗ್ರಾಮಗಳು, ಕನ್ನಡ ಭಾಷೆ ಪ್ರಚಲಿತದಲ್ಲಿವೆ ಈ ಕುರಿತಂತೆ ಹೆಚ್ಚಿನ ಸಂಶೋಧನೆಯನ್ನು ಕೈಗೊಳ್ಳಬೇಕು, ಕನ್ನಡದ ಚಾರಿತ್ರಿಕತೆಯನ್ನು ಹುಡುಕಬೇಕಾಗಿದೆ ಎಂದು ಹೇಳಿದರು.

ಪ್ರಸ್ತುತ ಸನ್ನಿವೇಶದಲ್ಲಿ ಇಂಗ್ಲೀಷ್ ವ್ಯಾಮೋಹದಿಂದ ಕನ್ನಡದಬಗ್ಗೆ ತಾತ್ಸರ ತೋರಲಾಗಿದೆ. ಸರಕಾರ ಸಹ ಕನ್ನಡ ಉಳಿಕೆಗೆ ಕ್ರೀಯಾತ್ಮಕವಾದಂತಹ ಕೆಲಸಮಾಡುತ್ತಿಲ್ಲ. ಕಳೆದ ೧೫ ವರ್ಷದಿಂದ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರ ನೇಮಕಾತಿ ನಡೆದಿಲ್ಲ. ಪರಿಣಾಮವಾಗಿ ಕಾಲೇಜುಗಳಲ್ಲಿ ಕನ್ನಡ ವಾತಾವರಣವೇ ವಿರಳವಾಗಿದೆ. ಪ್ರೌಢಶಾಲಾ ಪ್ರಶಿಕ್ಷಣ ತರಬೇತಿಯಲ್ಲಿ ಕನ್ನಡ ಭಾಷೆಯ ಪಠ್ಯವನ್ನು ಪರಿಚಯಿಸಿರುವುದಿಲ್ಲ. ಇದರಿಂದ ಕನ್ನಡ ಕಲಿಸುವ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ೧ನೇ ತರಗತಿಯಿಂದ ಇಂಗ್ಲೀಷ್ ಕಲಿಕೆ ಅಪ್ರಸ್ತುತವಾದ ತೀರ್ಮಾನವಾಗಿದೆ ಎಂದು ಟೀಕಿಸಿದರು.

ಕನ್ನಡವನ್ನು ಉಳಿಸಿಕೊಂಡು ಇಂಗ್ಲೀಷ್ ಕಲಿಯಬೇಕಾಗಿದೆ. ಕನ್ನಡವನ್ನು ಬಲವಂತವಾಗಿ ದೂಡಿ ಇಂಗ್ಲೀಷ್‌ಗೆ ಆಧ್ಯತೆ ನೀಡುವುದು ಬೇಡ ಕನ್ನಡತಾಯಿಗೆ ಸೀರೆ ಚಂದ, ಇಂಗ್ಲೀಷಿನ ಪೇಟಿಕೋಟ್ ತೋಡಿಸುವುದು ಬೇಡ ಎಂದು ನುಡಿದರು.

 

ಸಮ್ಮೇಳನ ಅಧ್ಯಕ್ಷರಾದ ಡಾ|| ಎಮ್. ಎನ್. ವಾಲಿ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾದ ಡಾ|| ಅರವಿಂದ ಮಾಲಗತ್ತಿ, ಸಾನಿಧ್ಯ ವಹಿಸಿದ ಮ.ನಿ.ಪ್ರ ಚನ್ನಬಸವ ಮಹಾಸ್ವಾಮಿ, ಮುರಘೇಂದ್ರ ಮಹಾಸ್ವಾಮಿ, ಸಂಗನಬಸವ ಶ್ರೀಗಳು, ಮಾತನಾಡಿದರು. ಇದೇ ಸಂದರ್ಭದಲ್ಲಿ ಕೊರಡು ಕೊನರು ಸ್ಮರಣ ಸಂಚಿಕೆಯನ್ನು ಡಾ|| ಶಿವಾನಂದ ಜಾಮದಾರ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗೋವಿಂದ ಎಂ. ಕಾರಜೋಳ ಉಪಸ್ಥಿತರಿದ್ದರು. ಶಾಸಕ ಎಸ್. ಕೆ. ಬೆಳುಬ್ಬಿ ಸ್ವಾಗತಿಸಿದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 

ಧ್ವಜಾರೋಹಣ -ಸಾಹಿತ್ಯ ಸಮ್ಮೇಳನದ ರಾಷ್ಟ್ರ ಧ್ವಜಾ ರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ನೆರವೇರಿಸಿದರು. ನಾಡ ಧ್ವಜವನ್ನು ಎಸ್. ಕೆ. ಬೆಳ್ಳುಬ್ಬಿ, ಸಾಹಿತ್ಯ ಪರಿಷತ್ತಿನ ಧ್ವಜವನ್ನು ಮಲ್ಲಿಕಾರ್ಜುನ ಯಂಡಿಗೇರಿ ನೆರವೇರಿಸಿದರು. ಅಂಬಾರಿಯ ಮೇಲೆ ತಾಯಿ ಭುವನೇಶ್ವರಿಯ ಮೆರವಣಿಗೆ ಜೊತೆಗೆ ವಿವಿಧ ಸ್ತಬ್ಧ ಚಿತ್ರಗಳು ಕಲಾತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಜರುಗಿತು.

 

ಇದೇ ಸಂದರ್ಭದಲ್ಲಿ ಬೇಸಾಯ ಪರಿಕರ ಒಳಗೊಂಡ ಜಾನಪದ ಕಲಾ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನಗಳನ್ನು ಎರಡು ದಿನ ಜರುಗಲಿವೆ.

 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org