Home | ದ.ಕ.ಜಿಲ್ಲಾ ವಾರ್ತೆ | ಕಾರ್ಕಳ | ಪುತ್ತೂರು : ಲಿಂಟಲ್‌ ಕುಸಿದು ವಿದ್ಯಾರ್ಥಿ ಮೃತ್ಯು

ಪುತ್ತೂರು : ಲಿಂಟಲ್‌ ಕುಸಿದು ವಿದ್ಯಾರ್ಥಿ ಮೃತ್ಯು

Font size: Decrease font Enlarge font

ಪುತ್ತೂರು : ನಿರ್ಮಾಣ ಹಂತ ದಲ್ಲಿದ್ದ ಶಾಲಾ ಬಿಸಿಯೂಟ ಕಟ್ಟಡದ ಲಿಂಟಲ್‌ (ಗೋಡೆ) ಕುಸಿದುಬಿದ್ದು ಶಾಲಾ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಿನ್ನೆ ಸಂಜೆ ಪುತ್ತೂರು ಪೇಟೆಯ ಹೊರವಲಯದ ಕಬಕ ಸಮೀಪದ ವಿದ್ಯಾಪುರದಲ್ಲಿ ನಡೆದಿದೆ. ಕಬಕ ವಿದ್ಯಾಪುರ ಸರ್ಕಾರಿ ಪ.ಪೂ. ಕಾಲೇಜಿನ 9ನೇ ತರಗತಿಯ ವಿದ್ಯಾರ್ಥಿಯಾದ ಬಂಟ್ವಾಳ ತಾಲೂಕಿನ ಅಳಕೆಮಜಲು ನಿವಾಸಿ ಅಬ್ದುಲ್‌ ಖಾದರ್‌ ಎಂಬವರ ಪುತ್ರ ಶಾರೂಕ್‌ಖಾನ್‌ ಯಾನೆ ಸಫ್ರಾಜ್‌ (19) ಮೃತಪಟ್ಟ ವಿದ್ಯಾರ್ಥಿ. ವಿದ್ಯಾಪುರ ಸರಕಾರಿ ಪ.ಪೂ. ಕಾಲೇಜಿನಲ್ಲಿ ಅಕ್ಷರದಾಸೋಹ ಯೋಜನೆಯ ಅಡುಗೆ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನಿರ್ಮಾಣ ಹಂತದಲ್ಲಿದ್ದ ಈ ಕಟ್ಟಡದ ಲಿಂಟಲ್‌ ಕುಸಿದು ಈ ದುರ್ಘಟನೆ ಸಂಭವಿಸಿದೆ. ಗೋಡೆಯ ಮೇಲೆ ಅಳವಡಿಸಲಾಗಿದ್ದ ಲಿಂಟಲ್‌ ಮೇಲೆ ಕಲ್ಲು ಕಟ್ಟದಿರುವುದು ಮತ್ತು ಲಿಂಟಲ್‌ಗೆ ವ್ಯವಸ್ಥಿತ ರೀತಿಯಲ್ಲಿ ತಾತ್ಕಾಲಿಕ ಆಧಾರ ಸ್ತಂಭಗಳನ್ನು ಅಳವಡಿಸದೆ ಕೆಲವೊಂದು ಬಿದಿರಿನ ತುಂಡನ್ನು ಮಾತ್ರ ಅಳವಡಿಸಿರುವುದು ಈ ದುರಂತಕ್ಕೆ ಕಾರಣವಾಗಿದೆ.


ಗುತ್ತಿಗೆದಾರ ಬೊಳುವಾರಿನ ಜಯರಾಮ್‌ ಈ ಕಾಮಗಾರಿಯನ್ನು ನಿರ್ವಹಿಸಿರುವುದಾಗಿ ತಿಳಿದು ಬಂದಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಇಂಜಿನಿಯರ್‌ ಹಾಗೂ ಶಿಕ್ಷಕರ ಬೇಜವಾಬ್ದಾರಿಯೇ ಘಟನೆಗೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಗುತ್ತಿಗೆದಾರರನ್ನು ಮತ್ತು ಇಂಜಿನಿಯರರನ್ನು ಬಂಧಿಸಿದ ಬಳಿಕವೇ ವಿದ್ಯಾರ್ಥಿಯ ಶವ ತೆಗೆಯಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ಪುತ್ತೂರು ನಗರ ಠಾಣಾಧಿಕಾರಿ ಶ್ರೀಕಾಂತ್‌, ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ವೈ ಶಿವರಾಮಯ್ಯ, ತಹಶೀಲ್ದಾರ್‌ ದಾಸೇಗೌಡ, ಅಕ್ಷರದಾಸೋಹ ಯೋಜನೆಯ ತಾಲೂಕು ನಿರ್ದೇಶಕ ಜಿನ್ನಪ್ಪ ಗೌಡ, ಪುರಸಭಾ ವಿಪಕ್ಷ ನಾಯಕ ಎಚ್‌ ಮಹಮ್ಮದ್‌ ಆಲಿ, ಗ್ರಾ.ಪಂ. ಅಧ್ಯಕ್ಷ ಸಾಬಾ ಮತ್ತಿತ್ತರರು ಆಕ್ರೋಶಿತ ಜನತೆಯೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಬಳಿಕವಷ್ಟೇ ಮೃತದೇಹವನ್ನು ಘಟನಾಸ್ಥಳದಿಂದ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. 

ಘಟನೆ ನಡೆದದ್ದು ಹೀಗೆ : ನಿನ್ನೆ ಸಂಜೆ 3.45ರ ವೇಳೆಗೆ ವಿದ್ಯಾರ್ಥಿ ಶಾರೂಕ್‌ಖಾನ್‌ ಮತ್ತಿತರ ಇಬ್ಬರು ವಿದ್ಯಾರ್ಥಿಗಳು ನೀರು ಕುಡಿಯಲೆಂದು ಶಾಲಾ ಕೊಠಡಿಯಿಂದ ಹೊರ ಹೋಗಿದ್ದರು. ಈ ವಿದ್ಯಾರ್ಥಿಗಳ ಪೈಕಿ ಶಾರೂಕ್‌ ಹೊರಹೋಗುತ್ತಿದ್ದ ವೇಳೆ ಲಿಂಟಲ್‌ಗೆ ಆಧಾರವಾಗಿ ಅಳವಡಿಸಲಾಗಿದ್ದ ಬಿದಿರಿನ ತುಂಡನ್ನು ಮುಟ್ಟಿದ ಪರಿಣಾಮವಾಗಿ ಬಿದಿರಿನ ತುಂಡು ಆಯತಪ್ಪಿ ಲಿಂಟಲ್‌ ಮೈ ಮೇಲೆ ಕುಸಿದು ಬಿದ್ದ ಪರಿಣಾಮ ತಲೆಯ ಭಾಗಕ್ಕೆ ಗಂಭೀರ ಗಾಯಗಳಾದ ಶಾರೂಕ್‌ಖಾನ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇಲಾಖಾ ತನಿಖೆ : ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರ, ಇಂಜಿನಿಯರ್‌ ಮತ್ತು ಶಾಲಾ ಶಿಕ್ಷಕರ ಬೇಜವಾಬ್ದಾರಿ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶೇಷಶಯನ ತಿಳಿಸಿದ್ದಾರೆ. ಈ ಬಗ್ಗೆ ಗುತ್ತಿಗೆದಾರ ಮತ್ತು ಇಂಜಿನಿಯರ್‌ ವಿರುದ್ಧ ಪೊಲೀಸ್‌ ತನಿಖೆ ನಡೆಯಲಿದೆ. ವಿದ್ಯಾರ್ಥಿ ಕಲ್ಯಾಣ ನಿಧಿಯಿಂದ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ರೂ. 30ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ.

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org