ಭಟ್ಕಳ: ಹೋಳಿ ಹಬ್ಬ ಆಚರಿಸಿದ ಕೊಂಕಣಿ ಖಾರ್ವಿ ಬಾಂಧವರು
ಭಟ್ಕಳ, ಫೆಬ್ರವರಿ 28: ಇಲ್ಲಿನ ಮಾವಿನಕುರ್ವೆ ಬಂದರದಲ್ಲಿ ಹೋಳಿ ಹಬ್ಬವನ್ನು ಕೊಂಕಣಿ ಖಾರ್ವಿ ಸಮಾಜದವರು ತಲೆತಲಾಂತರದಿಂದ ಸಂಪ್ರದಾಯಬದ್ದವಾಗಿ ವಿಶಿಷ್ಟರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ಹೋಳಿ ಹಬ್ಬವನ್ನು ಐದು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಸಮಾಜದವರೆಲ್ಲರೂ ಪಾಲ್ಗೊಳ್ಳುತ್ತಿರುವುದು ವಿಶೇಷ.
ಖಾರ್ವಿ ಸಮಾಜ ಬಂಧುಗಳಿಗೆ ಮಾಘ ಮಾಸದ ಪಾಲ್ಗುಣ ಬಂತೆಂದರೆ ಎಲ್ಲಿಲ್ಲದ ಸಂಭ್ರಮ. ಹೋಳಿ ಹಬ್ಬವನ್ನು ವಿಶೇಷವಾದ ನಂಬಿಯಿಂದ ಆಚರಿಸುವ ಇವರು ಪ್ರಥಮವಾಗಿ ಸಮುದ್ರ ತೀರದಲ್ಲಿ ಮರಳಿನ ತುಳಸಿ ನಿರ್ಮಿಸಿ ಪೂಜೆ ಮಾಡಿ ಶ್ರೀ ದುರ್ಗಾಪರಮೇಶ್ವರಿ ಮತ್ತು ಕುಟುಮೇಶ್ವರ ದೇವಸ್ಥಾನಕ್ಕೆ ತೆರಳಿ ತಮ್ಮ ಪೌರಾಣಿಕ ಜಾನಪದ ಗೀತೆಯನ್ನು ಹಾಡುವ ಪದ್ದತಿಯನ್ನೂ ಇಂದಿಗೂ ಸಂಪ್ರದಾಯವಾಗಿಟ್ಟುಕೊಂಡಿದ್ದಾರೆ. ವಿಶೇಷವೆಂತೆ ಈ ಸಂದರ್ಭದಲ್ಲಿ ರಾಮಾಯಣ, ಮಹಾಭಾರತದ ಹಾಡುಗಳನ್ನು ಹಾಡಿ ಕುಣಿಯುತ್ತಾರೆ. ಮಹಿಳೆಯರೂ, ಪುರುಷರು ಮಕ್ಕಳು ಸೇರಿದಂತೆ ಎಲ್ಲರೂ ಒಟ್ಟಾಗಿ ಹಾಡುಗಳನ್ನು ಹೇಳುತ್ತಾ, ಕುಣಿಯುತ್ತಾ ಮನೆ ಮನೆಗೆ ತೆರಳುತ್ತಾರೆ. ಪ್ರತಿ ಮನೆಗಳಲ್ಲೂ ಸಹ ಜಾನಪದ ಕಲೆಯಾದ ದಾಲೋರ ಹಾಡುವುದು ಕುಣಿಯುವುದೂ ಸಹ ವಾಡಿಕೆಯಾಗಿದೆ. ಈ ಸಂದರ್ಭದಲ್ಲಿ ಬಣ್ಣ ಹಾಕುವ ಪದ್ದತಿ ಸಹ ಅಸ್ತಿತ್ವದಲ್ಲಿದ್ದು, ಎಲ್ಲರೂ ಇದರಲ್ಲಿ ತೊಡಗಿಸಿಕೊಂಡು ಸಂಭ್ರಮಿಸುತ್ತಾರೆ. ಅಂತಿಮ ದಿನ ಹೋಳಿ ಕಾಮದಹನ ಮಾಡಿ ಸಮುದ್ರ ಸ್ನಾನ ಮಾಡಿಯೇ ಆ ದಿನ ಊಟ ಮಾಡಲಾಗುತ್ತದೆ. ಮಾರನೇ ದಿನ ಶ್ರೀ ದುರ್ಗಾಪರಮೇಶ್ವರಿ ಹಾಗೂ ಕುಟುಮೇಶ್ವರ ದೇವರ ವರ್ದಂತಿ ಉತ್ಸವ ಅನ್ನಸಂತರ್ಪಣೆ, ರಾತ್ರಿ ಪಲ್ಲಕ್ಕಿ ಉತ್ಸವವೂ ನಡೆಯಲಿದೆ. ಹೀಗೆ ಕೊಂಕಣಿ ಖಾರ್ವಿಗಳು ಹೋಳಿ ಹಬ್ಬವನ್ನು ಐದು ದಿನಗಳ ಕಾಲ ಇಂದಿಗೂ ಸಹ ಸಂಪ್ರದಾಯಬದ್ದವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಹಬ್ಬವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆ ಖಾರ್ವಿಗಳಿಗೆ ಹೆಮ್ಮೆಯಿದೆ.



del.icio.us
Digg
Comments (0 posted):
Post your comment