ಭಟ್ಕಳ: ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿರುವ ಕೋಣಾರಗುಡ್ಡದ ಪ್ರಾಥಮಿಕ ಆರೋಗ್ಯ ಕೇಂದ್ರ
ಭಟ್ಕಳ. ಫೆಬ್ರವರಿ 28: ತಾಲೂಕಿನ ಕೋಣಾರ ಗುಡ್ಡದ ಮೇಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಯಾರಿಗೂ ಉಪಯೋಗಕ್ಕಿಲ್ಲದಂತಾಗಿದ್ದು,ಜನವಸತಿ ಇರುವ ಪ್ರದೇಶಕ್ಕೆ ಅದನ್ನು ಸ್ಥಳಾಂತರಿಸಬೇಕು ಎಂಬ ಒತ್ತಾಯ ಕಳೆದ ಹಲವಾರು ವರ್ಷಗಳಿಂದ ಕೇಳಿ ಬಂದಿದ್ದರೂ ಸಹ ಇನ್ನೂ ಕಾರ್ಯರೂಪಕ್ಕೆ ಬರದೇ ಇರುವುದು ಆ ಭಾಗದ ಸಾರ್ವಜನಿಕರಲ್ಲಿ ಅಸಮಾಧಾನವನ್ನುಂಟು ಮಾಡಿದೆ.
ಕಳೆದ ಹದಿನೈದು ವರ್ಷಗಳ ಹಿಂದೆ ಕೋಣಾರ,ಮಾರೂಕೇರಿ ಹಾಗೂ ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಅನುಕೂಲವಾಗಬಹುದು ಎಂಬ ಉದ್ದೇಶದಿಂದ ನಿರ್ಮಿಸಲಾದ ಈ ಆಸ್ಪತ್ರೆಗೆ ರೋಗಿಗಳು ಬರುವುದೇ ಕಡಿಮೆ. ಕಾರಣ ಆಸ್ಪತ್ರೆ ನಿರ್ಜನ ಪ್ರದೇಶವಾದ ಗುಡ್ಡದ ಮೇಲಿದೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರಬೇಕಾದರೆ ಕೋಣಾರ,ಮಾರೂಕೇರಿ ಭಾಗದ ಜನರು ಕನಿಷ್ಟ ಎರಡು ಕಿ.ಮಿ ನಡೆಯಬೇಕಿದೆ. ಇನ್ನು ಹಾಡುವಳ್ಳಿಯವರು ನಾಲ್ಕು ಕಿ.ಮಿ ನಿಂದ ಬರಬೇಕು. ಆಸ್ಪತ್ರೆ ಮಂಜೂರಿಯಾದ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನವಸತಿ ಇದ್ದ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಿಸಲು ಇಚ್ಛಾಶಕ್ತಿ ಪ್ರದರ್ಶಿಸಿದ್ದಲ್ಲಿ ಇಂದು ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂಬುದು ಆ ಭಾಗದ ಜನರ ಅಭಿಪ್ರಾಯವಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಓರ್ವರು ವೈದ್ಯರಿದ್ದು, ಸಿಬ್ಬಂದಿಗಳೂ ಇದ್ದಾರೆ. ಬೇಕಾದಷ್ಟು ಔಷಧಿ,ಇಂಜಕ್ಸನ್‌ಕೂಡ ಇದೆ. ಶಿಥಿಲಾವಸ್ಥೆಯತ್ತ ತಲುಪಿದ್ದ ಕಟ್ಟಡವನ್ನು ರಿಪೇರಿಗೊಳಿಸಿ ಸುಸಜ್ಜಿತಗೊಳಿಸಲಾಗಿದೆ. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಸಹ ಆಸ್ಪತ್ರೆಯತ್ತ ರೋಗಿಗಳೇ ಬರುತ್ತಿಲ್ಲ. ಆಸ್ಪತ್ರೆ ನಿರ್ಜನ ಪ್ರದೇಶದಲ್ಲಿರುವ ಬದಲು ಜನವಸತಿ ಇದ್ದ ಪ್ರದೇಶದಲ್ಲಿದ್ದಿದ್ದರೆ ಎಷ್ಟೋ ಮಂದಿಗೆ ಅನುಕೂಲವಾಗುತ್ತಿತ್ತು. ಸರಕಾರದ ಘನ ಉದ್ದೇಶವೂ ಈಡೇರುತ್ತಿತ್ತು. ನಿರ್ಜನ ಪ್ರದೇಶದಲ್ಲಿರುವ ಆಸ್ಪತ್ರೆಯನ್ನು ಸ್ಥಳಾಂತರಿಸಿ ಮೂರು ಪಂಚಾಯತ್‌ಗೆ ಕೇಂದ್ರ ಸ್ಥಾನವಾದ ಕುಂಟುವಾಣಿಯಲ್ಲಿ ನಿರ್ಮಿಸಬೇಕೆಂದು ಈಗಾಗಲೇ ಹಾಡುವಳ್ಳಿ ಮತ್ತು ಮಾರೂಕೇರಿ ಪಂಚಾಯತ್‌ನವರು ಠರಾವು ಪಾಸು ಮಾಡಿ ತಾಲೂಕಾ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಳುಹಿಸಿದ್ದಾರೆ. ಮಾರೂಕೇರಿ ಹಾಗೂ ಹಾಡುವಳ್ಳಿಯಲ್ಲಿ ನಡೆದ ಪ್ರತಿ ಗ್ರಾಮ ಸಭೆ ಹಾಗೂ ಕಂದಾಯ ಇಲಾಖೆಯವರು ನಡೆಸುವ ಜನಸ್ಪಂದನಾ ಸಭೆಯಲ್ಲೂ ಸಹ ಹಲವಾರು ಬಾರಿ ವಿಷಯ ಪ್ರಸ್ತಾಪವಾಗಿದೆ. ಆದರೆ ಇಷ್ಟರ ವರೆಗೆ ಫಲಿತಾಂಶ ಮಾತ್ರ ಶೂನ್ಯ. ನಿರ್ಜನ ಪ್ರದೇಶದಲ್ಲಿರುವ ಆಸ್ಪತ್ರೆಯನ್ನು ಮೂರು ಪಂಚಾಯತ್‌ಗೆ ಕೇಂದ್ರ ಸ್ಥಾನವಾದ ಕುಂಟುವಾಣಿಗೆ ಸ್ಥಳಾಂತರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇಲ್ಲಿ ಆಸ್ಪತ್ರೆ ಸ್ಥಳಾಂತರ ಮಾಡುವುದರಿಂದ ಭಟ್ಕಳದಿಂದ ದೂರದಲ್ಲಿರುವ ಹೆಂಜಲೆ, ಬಡೆಬಾಗಿಲು, ಹಳ್ಯಾಣಿ, ಹಾಡುವಳ್ಳಿ,ಅರವಕ್ಕಿ ಮುಂತಾದ ಪ್ರದೇಶಗಳ ಜನರು ಏನಾದರೂ ಸಣ್ಣಪುಟ್ಟ ಕಾಯಿಲೆ ಬಂದರೂ ಸಹ ಪಟ್ಟಣಕ್ಕೆ ಬರುವುದು ತಪ್ಪಿದಂತಾಗಿ ಹತ್ತಿರದಲ್ಲೇ ಅವರಿಗೆ ಚಿಕಿತ್ಸೆ ಲಭಿಸಿದಂತಾಗುತ್ತದೆ. ಕಳೆದ ಹಲವಾರು ವರ್ಷಗಳ ಬೇಡಿಕೆಯಾದ ನಿರ್ಜನ ಪ್ರದೇಶದಲ್ಲಿರುವ ಆಸ್ಪತ್ರೆಯನ್ನು ಜನವಸತಿ ಇರುವ ಪ್ರದೇಶಕ್ಕೆ ಸ್ಥಳಾಂತರಿಸಲು ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಪ್ರಯತ್ನ ನಡೆಸಬೇಕಿದೆ.



del.icio.us
Digg
Comments (0 posted):
Post your comment