ಭಟ್ಕಳ: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿಶೇಷ ತರಬೇತಿ
ಭಟ್ಕಳ, ಮಾರ್ಚ್ 9:ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಕನಿಷ್ಠ ಉತ್ತೀರ್ಣ ಹಂತಕ್ಕೆ ತಲುಪಿಸಲು ಪ್ರಯತ್ನ ನಡೆಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಪ್ರೌಢ ಶಾಲಾ ಶಿಕ್ಷಕರ ಸಂಘ ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಸರಣಿ ಪರೀಕ್ಷೆಯಲ್ಲಿ ೩೦ಕ್ಕಿಂತಲೂ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ತರಬೇತಿಗಾಗಿ ಆಯ್ಕೆ ಮಾಡಲಾಗಿದ್ದು, ತಾಲೂಕಿನ ವಿವಿಧ ಪ್ರೌಢಶಾಲೆಗಳ 750 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ತಾಲೂಕಿನಲ್ಲಿ ನ್ಯೂ ಇಂಗ್ಲೀಷ್ ಸ್ಕೂಲ್, ಜನತಾ ವಿದ್ಯಾಲಯ ಶಿರಾಲಿ ಹಾಗೂ ಜನತಾ ವಿದ್ಯಾಲಯ ಮುರುಡೇಶ್ವರದಲ್ಲಿ ಕಲಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಗಣಿತಕ್ಕೆ ೨ ದಿವಸ, ವಿಜ್ಞಾನಕ್ಕೆ ೧ ಹಾಗೂ ಇಂಗ್ಲೀಷ್‌ಗೆ ೧ ದಿನವನ್ನು ನಿಗದಿ ಪಡಿಸಲಾಗಿದೆ. ಪ್ರತಿ ತರಗತಿಗೆ ೨ ರಿಂದ ಮೂರು ಶಿಕ್ಷಕರನ್ನು ತರಬೇತಿಗಾಗಿ ನೇಮಿಸಲಾಗಿದೆ. ಈ ಕುರಿತು ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲೆಯಲ್ಲಿಯೇ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಸುಲಭದ ಪಾಠಗಳನ್ನು ಆಯ್ದುಕೊಂಡು ವಿದ್ಯಾರ್ಥಿಗಳಿಗೆ ಕನಿಷ್ಠ ಪಾಸಾಗುವ ಅರ್ಹತೆಯನ್ನು ತಂದು ಕೊಡುವುದು ಉದ್ಧೇಶವಾಗಿದೆ ಎಂದು ವಿವರಿಸಿದರು. ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



del.icio.us
Digg
Comments (0 posted):
Post your comment